
ಗ್ಯಾಸ್ ಸೋರಿಕೆಯಿಂದ ಹಾರಿತು ಮೂವರ ಪ್ರಾಣಪಕ್ಷಿ: ಯಾದಗಿರಿ ಕಡೇಚೂರಿನಲ್ಲಿ ದುರಂತ..!
ಯಾದಗಿರಿ: ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸೋರಿಕೆ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಕೆಮಿಕಲ್ ಗ್ಯಾಸ್ ಸೋರಿಕೆಯಿಂದ ಹಲವು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಬೆಳಿಗ್ಗೆ ಏಕಾಏಕಿ ಗ್ಯಾಸ್ ಲೀಕ್ ಆಗಿದೆ. ಲೀಕ್ ಆದ ವಿಷಾನಿಲವು ಕಾರ್ಖಾನೆಯೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ದೇಹದ ಭಾಗಕ್ಕೆ ಸೇರಿಕೊಂಡಿದೆ.
ಉಸಿರುಗಟ್ಟಿ ಅಸ್ವಸ್ಥರಾದ ಕಾರ್ಮಿಕರನ್ನು ಕೂಡಲೇ ಸ್ಥಳೀಯರು ಮತ್ತು ಇತರ ಸಹೋದ್ಯೋಗಿಗಳು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು.ಈ ಘಟನೆಯಲ್ಲಿ ವಿಕ್ರಮ್ ಸಿಂಗ್, ಸಂಜಯ್ ಸಿಂಗ್ ಮತ್ತು ಗಣೇಶ್ ಎಂಬ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಗ್ಯಾಸ್ ಸೋರಿಕೆಯಿಂದ ಉಸಿರಾಟದ ತೊಂದರೆ, ತಲೆತಿರುಗುವಿಕೆ, ಕಣ್ಣು ಮತ್ತು ಚರ್ಮದ ಸಮಸ್ಯೆಯಿಂದ ಬಳಲುತ್ತಿರುವ ಹಲವು ಮಂದಿ ಕಾರ್ಮಿಕರಿಗೆ ಯಾದಗಿರಿ ಜಿಲ್ಲಾ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.ಅವಘಡದ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದರು. ಕಾರ್ಖಾನೆಯ ಸುತ್ತಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ಯಾಸ್ ಸೋರಿಕೆಗೆ ಕಾರಣವೇನು ಎಂಬ ಕುರಿತು ತನಿಖೆಗೆ ಆದೇಶಿಸಲಾಗಿದೆ. ಕಾರ್ಖಾನೆಯ ಸುರಕ್ಷತಾ ಕ್ರಮಗಳಲ್ಲಿ ಲೋಪವಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.ಮೃತ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಸ್ಥಳೀಯರು ಮತ್ತು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.
