
ತಮಿಳುನಾಡು ಜನ ಮಾತ್ರ ರೈತರಾ? ಕರ್ನಾಟಕದವರು ರೈತರಲ್ಲವೇ?ನೀರು ಬಿಡಬೇಡಿ: ಹೆಚ್.ಡಿ.ಕುಮಾರಸ್ವಾಮಿ
ಹಾಸನ,ಜು.31: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸದಸ್ಯರು ನವದೆಹಲಿಯಲ್ಲಿ ಎಸಿ ರೂಂನಲ್ಲಿ ಕೂತು ನೀರು ಬಿಡಿ ಎಂದು ಕರ್ನಾಟಕಕ್ಕೆ ಆದೇಶ ನೀಡುವುದು ಸರಿಯಲ್ಲ. ಆಯಾ ರಾಜ್ಯಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿದ ನಂತರ ಆದೇಶ ಹೊರಡಿಸಬೇಕಿತ್ತು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 3,500 ನೀರನ್ನು ಹರಿಸಬೇಕು ಎಂದು ಕಾವೇರಿ ಪ್ರಾಧಿಕಾರ ಊಹಾತ್ಮಕವಾಗಿ ಆದೇಶ ನೀಡಿದೆ. ಬರುವ ದಿನಗಳಲ್ಲಿ ಕಾವೇರಿ ಕಣಿವೆ ಜಲಾಶಯಗಳಿಗೆ 12 ಟಿಎಂಸಿ ನೀರು ಹರಿದು ಬರಬಹುದು ಎಂದು ಅದು ಊಹೆ ಮಾಡಿದೆ. ಯಾವ ಆಧಾರದಲ್ಲಿ ಇಂತಹ ಊಹೆಯನ್ನು ಪ್ರಾಧಿಕಾರ ಮಾಡಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಒಂದು ವೇಳೆ ನೀರು ಹರಿದು ಬರದೇ ಇದ್ದರೆ ಕರ್ನಾಟಕದ ಪರಿಸ್ಥಿತಿ ಏನು ಎಂದು ಕಳವಳ ವ್ಯಕ್ತಪಡಿಸಿದರು
ಹಾಸನದಲ್ಲಿ ಮಾತನಾಡಿದ ಅವರು,ಕೇಂದ್ರ ಸಚಿವರು,ಕಾವೇರಿ ಪ್ರಾಧಿಕಾರದ ನಿರ್ಧಾರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ.ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವನ್ನು ನಿರಂತರವಾಗಿ ನಿರ್ಲಕ್ಷ ಮಾಡುವ ಕೆಲಸ ಆಗುತ್ತಿದೆ. ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಕಾವೇರಿ ಸರ್ವಪಕ್ಷ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಆದೇಶ ಹೊರಡಿಸುವ ಮುನ್ನ ಪ್ರಾಧಿಕಾರವು ಕರ್ನಾಟಕದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಎಷ್ಟು ನೀರಿನ ಸಂಗ್ರಹ ಇದೆ? ಕುಡಿಯುವ ನೀರಿಗೆ ಎಷ್ಟು ನೀರಿನ ಅಗತ್ಯವಿದೆ ಹಾಗೂ ತಮಿಳುನಾಡಿನ ಮೆಟ್ಟೂರು ಮತ್ತು ಭವಾನಿ ಜಲಾಶಯಗಳಲ್ಲಿ ಎಷ್ಟು ನೀರಿನ ಸಂಗ್ರಹ ಇದೆ ಹಾಗೂ ಅಲ್ಲಿನ ಜನರಿಗೆ ಕುಡಿಯುವ ನೀರಿನ ಉದ್ದೇಶ ನೀರು ಬೇಕಿದೆ ಎಂಬ ಅಂಶಗಳ ಬಗ್ಗೆ ಅಣೆಕಟ್ಟೆಗಳಿಗೆ ಭೇಟಿ ನೀಡಿ ಕೂಲಂಕಶವಾಗಿ ಮಾಹಿತಿ ಪಡೆಯಬೇಕಿತ್ತು. ಅದನ್ನು ಮಾಡದೆ ಏಕಪಕ್ಷವಾಗಿ ಆದೇಶ ಹೊರಡಿಸಿ ಕರ್ನಾಟಕದ ಜನರ ಪಾಲಿಗೆ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದೆ.ನಿಮ್ಮ ಆದೇಶವನ್ನು ಪಾಲನೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯವು ಪ್ರಾಧಿಕಾರದ ಮುಖಕ್ಕೆ ಹೇಳಬೇಕಾಗಿತ್ತು. ಆದರೆ ಈ ಬಗ್ಗೆ ಅಸಹಾಯಕ ಮೌನ ತಾಳಿರುವುದು ನನಗೆ ಸರಿ ಕಾಣುತ್ತಿಲ್ಲ ಎಂದು ಸಚಿವರು ಹೇಳಿದರು.
ತಮಿಳುನಾಡು ಜನ ಮಾತ್ರ ರೈತರಾ? ಕರ್ನಾಟಕದವರು ರೈತರಲ್ಲವೇ? ನೀರು ಬಿಡಿ ಎಂದು ಹೇಳುವುದಕ್ಕೆ ಪ್ರಾಧಿಕಾರ ಯಾವ ಅಂಶಗಳನ್ನು ಪರಿಗಣಿಸಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ರಾಜ್ಯದಲ್ಲಿ ಬರದಿಂದ ರೈತರು ತತ್ತರಿಸಿದ್ದಾರೆ. ಕಾವೇರಿ ಕಣಿವೆ ಪ್ರದೇಶದಲ್ಲಿ ಬೆಳೆಗಳು ಒಣಗುತ್ತಿವೆ. ನಮ್ಮ ರೈತರಿಗೇ ನೀರು ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಆದರೆ ನೆರೆ ರಾಜ್ಯಕ್ಕೆ ಹರಿಸಬೇಕು ಎಂದು ಹೇಳಿದರೆ ಹೇಗೆ? ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಎಲ್ಲಾ ಜಲಾಶಯಗಳು ಖಾಲಿ ಇವೆ. ಕಾವೇರಿ ಭಾಗದಲ್ಲಿ 54 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹ ಇದೆ. ನಮಲ್ಲಿ ಮಳೆ ಕೊರತೆ ಉಂಟಾಗಿದೆ. ಕೃಷಿ ಬೆಳೆಗಳಿಗೆ ನೀರು ಬಿಡುವುದಿಲ್ಲ ಎಂದು ಈಗಾಗಲೇ ರಾಜ್ಯ ಸರಕಾರ ಘೋಷಣೆ ಮಾಡಿದೆ. ಮುಂದಿನ ಆರು ತಿಂಗಳಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕೆ 30 ಟಿಎಂಸಿ ನೀರಿನ ಅಗತ್ಯವಿದೆ. ಕುಡಿವ ನೀರಿಗೆ ಮೊದಲ ಆದ್ಯತೆ ಎನ್ನುವುದು ಇವರಿಗೆ ಗೊತ್ತಿಲ್ಲವೇ? ತಮಿಳುನಾಡು ಯಾವ ಉದ್ದೇಶಕ್ಕಾಗಿ ನೀರು ಕೇಳುತ್ತಿದೆ ಎಂಬುದನ್ನು ಖುದ್ದಾಗಿ ಪ್ರಾಧಿಕಾರದ ಸದಸ್ಯರು ಪರಿಶೀಲನೆ ನಡೆಸಬೇಕಿತ್ತಲ್ಲವೇ? ರೈತರು ಮತ್ತು ಕನ್ನಡ ಪುರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಸರಿ ಇದೆ. ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಎಂದು ಸಚಿವರು ಹೇಳಿದರು.
ಅಧಿಕಾರದ ಆದೇಶ ಸಂಪೂರ್ಣ ಅವೈಜ್ಞಾನಿಕ ಎಂಬುದು ನನ್ನ ಅಭಿಪ್ರಾಯ. ನೀರು ಬಿಡಬೇಕು ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಲು ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ. ನಮ್ಮ ಪಕ್ಷ ತಪ್ಪದೇ ಈ ಸಭೆಯಲ್ಲಿ ಪಾಲ್ಗೊಳ್ಳುತ್ತದೆ. ಇಂದಿನಿಂದ ಇಂತಹ ಸಂದರ್ಭ ಎದುರಾದಾಗ ಸರ್ವಪಕ್ಷ ಸಭೆ ಕರೆದು ಪರಿಹಾರವನ್ನು ಕಂಡುಕೊಂಡ ನಿದರ್ಶನಗಳಿವೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
