
ದಲಿತ ಮುಖಂಡ ದೇವಿಂದ್ರಪ್ಪ ದಳಪತಿ ಕೊಲೆ ಪ್ರಕರಣ..!
ಯಾದಗಿರಿ: ಜಿಲ್ಲೆಯ ಶಹಾಪೂರ ತಾಲೂಕಿನ ಕನ್ಯಾಕೋಳುರ ಗ್ರಾಮದಲ್ಲಿ ನಡೆದಿದ್ದ ದಲಿತ ಮುಖಂಡ ದೇವಿಂದ್ರಪ್ಪ ದಳಪತಿ ಅವರ ಅಮಾನವೀಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಾದಗಿರಿ ಜಿಲ್ಲಾ ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಒಟ್ಟು 17 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ₹4.25 ಲಕ್ಷ ದಂಡ ವಿಧಿಸಿ ಆದೇಶಿಸಿದೆ.

ಗ್ರಾಮದ ಜಾತ್ರಾಮಹೋತ್ಸವದಲ್ಲಿ ಬ್ಯಾನರ್ ಹರಿದ ಸಣ್ಣ ವಿಚಾರಕ್ಕೆ ಸವರ್ಣೀಯರು ಹಾಗೂ ದಲಿತರ ನಡುವೆ ಭೀಕರ ಗಲಾಟೆ ನಡೆದಿತ್ತು.
ಈ ಗಲಾಟೆಯ ದ್ವೇಷದ ಹಿನ್ನೆಲೆಯಲ್ಲಿ ದಲಿತ ಮುಖಂಡ ದೇವಿಂದ್ರಪ್ಪ ದಳಪತಿ ಅವರನ್ನು ಅಮಾನವೀಯವಾಗಿ ಹತ್ಯೆ ಮಾಡಲಾಗಿತ್ತು.
2014ರಲ್ಲಿ ಶಹಾಪೂರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.
ಸುದೀರ್ಘ 10 ವರ್ಷಗಳ ನ್ಯಾಯಾಂಗ ಹೋರಾಟದ ಬಳಿಕ ಇಂದು ನ್ಯಾಯಾಲಯವು ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ.
