
ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ..!
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದೆ. ನಾಡದೇವತೆಯ ದರ್ಶನ ಪಡೆಯಲು ಬೆಟ್ಟಕ್ಕೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದುಬಂದಿದ್ದು, ಚಾಮುಂಡಿ ಬೆಟ್ಟ ಭಕ್ತಸಾಗರದಲ್ಲಿ ತೇಲಾಡುತ್ತಿದೆ.
ದೇವಿಗೆ ವಿಶೇಷ ಅಲಂಕಾರ ಮತ್ತು ಪೂಜೆ ಆಷಾಢದ ಮೊದಲ ಶುಕ್ರವಾರದ ಅಂಗವಾಗಿ ಮುಂಜಾನೆ 3.30ಕ್ಕೆ ಚಾಮುಂಡಿ ತಾಯಿಗೆ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯಗಳು ನೆರವೇರಿದವು. ದೇವಿಗೆ ಕಣ್ಣುಮನ ಸೆಳೆಯುವ ಹಸಿರು ಸೀರೆ ಉಡಿಸಿ, ಭವ್ಯವಾದ ನಾಗಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆ 5.30ರಿಂದಲೇ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಂತು ಶ್ರದ್ಧಾಭಕ್ತಿಯಿಂದ ದೇವಿಯ ಕೃಪೆಗೆ ಪಾತ್ರರಾದರು.

ಭಕ್ತರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಜಿಲ್ಲಾಡಳಿತ ಹಾಗೂ ದೇವಾಲಯ ಮಂಡಳಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಭಕ್ತರ ಅನುಕೂಲಕ್ಕಾಗಿ ಲಲಿತ ಮಹಲ್ ಪ್ಯಾಲೇಸ್ ಮೈದಾನದಿಂದ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ (KSRTC) ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ದರ್ಶನ ಮುಗಿಸಿ ಬರುವ ಭಕ್ತಾದಿಗಳಿಗೆ ಕುಂಕುಮ ಪ್ರಸಾದ ಹಾಗೂ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ.
