LatestTop Storiesರಾಜ್ಯ-Karnatakaರಾಷ್ಟ್ರೀಯ-National

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ದೋಷಾರೋಪ ಪಟ್ಟಿಯಲ್ಲಿ ಅಧಿಕಾರಿಗಳ ಹೆಸರಿಲ್ಲ

ನವದೆಹಲಿ.ಜು೧೧: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ , ಈ ಅಕ್ರಮದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗಳು ಅಥವಾ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಪದಾಧಿಕಾರಿಗಳ ನೇರ ಪಾತ್ರವಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಈ ತಿಂಗಳ ಕೊನೆಯಲ್ಲಿ ಸಲ್ಲಿಕೆಯಾಗಲಿರುವ ಸಿಬಿಐನ ಚೊಚ್ಚಲ ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್‌ಶೀಟ್) ಕೇವಲ ೧೩ ಜನ ಖಾಸಗಿ ವ್ಯಕ್ತಿಗಳ ಹೆಸರನ್ನು ಮಾತ್ರ ಉಲ್ಲೇಖಿಸಲಾಗುತ್ತಿದ್ದು, ಇದರಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಎನ್‌ಟಿಎ ಜೊತೆ ಒಪ್ಪಂದ ಮಾಡಿಕೊಂಡಿದ್ದ ಮೂವರು ಶಿಕ್ಷಕರೇ ಪ್ರಮುಖ ಸೂತ್ರಧಾರಿಗಳು ಎಂದು ತಿಳಿದುಬಂದಿದೆ.

ಪ್ರಶ್ನೆಪತ್ರಿಕೆಗಳು ಎನ್‌ಟಿಎ ಕಚೇರಿಯಿಂದ ನೇರವಾಗಿ ಸೋರಿಕೆಯಾಗಿಲ್ಲ. ಬದಲಿಗೆ, ಪರೀಕ್ಷಾ ಮಂಡಳಿಯು ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ನಿಯೋಜಿಸಿದ್ದ ಗುತ್ತಿಗೆ ಆಧಾರಿತ ಶಿಕ್ಷಕರೇ ಈ ಕೃತ್ಯ ಎಸಗಿದ್ದಾರೆ ಎಂದು ಸಿಬಿಐ ಮೂಲಗಳು ಬಹಿರಂಗಪಡಿಸಿವೆ. ತನಿಖೆಯ ವೇಳೆ ಯಾವುದೇ ಸರ್ಕಾರಿ ಅಧಿಕಾರಿಯ ಶಾಮೀಲಾತಿ ಪತ್ತೆಯಾಗದ ಹಿನ್ನೆಲೆಯಲ್ಲಿ, ಸಿಬಿಐ ಚಾರ್ಜ್‌ಶೀಟ್ ಸಲ್ಲಿಸುವ ಮುನ್ನ ಸರ್ಕಾರದ ಯಾವುದೇ ಪೂರ್ವಾನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಇದು ಕಾನೂನು ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಲಿದೆ.

ದೋಷಾರೋಪ ಪಟ್ಟಿಯಲ್ಲಿ ಅಧಿಕಾರಿಗಳ ಹೆಸರಿಲ್ಲ

ಸಿಬಿಐ ಸದ್ಯ ೧೭೦ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಹಾರ್ಡ್ ಡ್ರೈವ್‌ಗಳು ಮತ್ತು ಕೋಚಿಂಗ್ ಸೆಂಟರ್‌ಗಳ ದಾಖಲೆಗಳನ್ನು ಜಾಲಾಡುತ್ತಿದ್ದು, ಬಂಧಿತ ಮೂವರು ಶಿಕ್ಷಕರ ಕರಾಳ ಮುಖವಾಡ ಕಳಚಿ ಬಿದ್ದಿದೆ:
ಪಿ.ವಿ. ಕುಲಕರ್ಣಿ (ಕೆಮಿಸ್ಟ್ರಿ ಶಿಕ್ಷಕ) ಎನ್‌ಟಿಎನ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಂಡದಲ್ಲಿದ್ದ ಈತ, ಏಪ್ರಿಲ್ ತಿಂಗಳಲ್ಲೇ ತನ್ನ ಪುಣೆಯ ನಿವಾಸದಲ್ಲಿ ಸಹಚರರ ನೆರವಿನಿಂದ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ, ಪ್ರಶ್ನೆ ಮತ್ತು ಉತ್ತರಗಳನ್ನು ಬರೆಸಿದ್ದ. ವಿದ್ಯಾರ್ಥಿಗಳ ಕೈಬರಹದ ನೋಟ್ಸ್ ಅಸಲಿ ಪ್ರಶ್ನೆಪತ್ರಿಕೆಗೆ ಹೂಡಿಕೆಯಾಗಿದೆ.ಮನೀಶಾ ಮಂಧಾರೆ (ಬಾಟನಿ ಉಪನ್ಯಾಸಕಿ) ಈಕೆಗೆ ಏಪ್ರಿಲ್ ೨೭ರಷ್ಟರಲ್ಲೇ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಪ್ರಶ್ನೆಗಳು ಲಭ್ಯವಾಗಿದ್ದವು. ಈಕೆಯೂ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಗುಪ್ತವಾಗಿ ಪ್ರಶ್ನೆಗಳನ್ನು ಸೋರಿಕೆ ಮಾಡಿದ್ದಾಳೆ.ಮನೀಶಾ ಹವಾಲ್ದಾರ್ (ಫಿಸಿಕ್ಸ್ ತಜ್ಞೆ): ಭೌತಶಾಸ್ತ್ರದ ಪ್ರಶ್ನೆಪತ್ರಿಕೆಯ ಸಂಪೂರ್ಣ ಅಕ್ಸೆಸ್ ಹೊಂದಿದ್ದ ಈಕೆ, ಆ ಪ್ರಶ್ನೆಗಳನ್ನು ಸಹ-ಆರೋಪಿಗಳು ಮತ್ತು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದಾಳೆ.

ಚಾರ್ಜ್‌ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಸಿಬಿಐ ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಮಂಡಳಿಗೆ ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳ ಕುರಿತು ವಿಸ್ತೃತ ವರದಿ ನೀಡಲಿದೆ. ಭವಿಷ್ಯದಲ್ಲಿ ಇಂತಹ ಅಕ್ರಮ ತಡೆಯಲು, ಒಕ್ಕೂಟ ಲೋಕಸೇವಾ ಆಯೋಗ ಅನುಸರಿಸುವ ಅತ್ಯಂತ ಕಟ್ಟುನಿಟ್ಟಿನ ಭದ್ರತಾ ಮತ್ತು ಪಾರದರ್ಶಕ ನಿಯಮಾವಳಿಗಳನ್ನು ಎನ್‌ಟಿಎ ಪರೀಕ್ಷೆಗಳಿಗೂ ಅಳವಡಿಸಿಕೊಳ್ಳುವಂತೆ ಸಿಬಿಐ ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

Share with Friends
author avatar
Digital Desk