BlogLatestಬೆಂಗಳೂರು-Bengaluru

ಯಶವಂತಪುರ ಫ್ಲೈಓವರ್‌ನಿಂದ ಕಾರು ಕೆಳಗೆ ಬಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸಾವು

ಬೆಂಗಳೂರು : ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಾರು ಫ್ಲೈಓವರ್ನಿಂದ ಕೆಳಗೆ ಬಿದ್ದು ಸಾಫ್ಟ್ ವೇರ್ ಎಂಜಿನಿಯರ್ ಮೃತಪಟ್ಟ ಘಟನೆ ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಮೃತನನ್ನು ಶಬರೀಶ್(29)ಎಂದು ಗುರುತಿಸಲಾಗಿದೆ.

ತಮಿಳುನಾಡು ಮೂಲದ ಮಿಥುನ್ ಜೊತೆ ಆತನ ಕಾರಿನಲ್ಲಿ ವೀಸಾ ಪಡೆಯಲು ಶಬರೀಶ್ ನಗರಕ್ಕೆ ಬಂದಿದ್ದರು. ಈತನ ಜೊತೆಯಲ್ಲಿದ್ದ ನಗರದ ನಿವಾಸಿಗಳಾದ ಶಂಕರ್. ಈತನ ಸಹೋದರಿ ಅನುಶ್ರೀ ಹಾಗೂ ಸ್ನೇಹಿತ ಮಿಥುನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದರು.

ಕಾರಿನಲ್ಲಿ ಊಟಕ್ಕೆಂದು ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಮಲ್ಲೇಶ್ವರಂ ಮೂಲಕ ಸದಾಶಿವ ನಗರದ ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಫ್ಲೈಓವರ್ನಲ್ಲಿ ಹೋಗುತ್ತಿದ್ದಾಗ ಅತಿವೇಗದಿಂದಾಗಿ ಕಾರು ನಿಯಂತ್ರಣ ತಪ್ಪಿ ಫ್ಲೈಓವರ್ನ ಡಿವೈಡರ್ಗೆ ಅಪ್ಪಳಿಸಿ ಎದುರಿಗೆ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು ಫ್ಲೈಓವರ್ನಿಂದ ಕೆಳಗೆ ಬಿದ್ದಿದೆ.

ಗಂಭೀರಗಾಯಗೊಂಡಿದ್ದ ಶಬರೀಶ್ ಚಿಕಿತ್ಸೆ ಫಲಿಸದೆ ಬೆಳಗ್ಗೆ ಮೃತಪಟ್ಟಿದ್ದಾರೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮೃತದೇಹವನ್ನಿಡಲಾಗಿದೆ.ಬೈಕ್ ಸವಾರ ಕಾಚೋಮಾಚನಹಳ್ಳಿ ನಿವಾಸಿ, ಎಲೆಕ್ಟ್ರೀಷಿಯನ್ ಮಂಜುನಾಥ್(38) ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿ ತಿಳಿದು ಯಶವಂತಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತದ ತೀವ್ರತೆಯಿಂದಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿ ಎರಡು ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಅದೃಷ್ಟವಶಾತ್ ಕಾರು ಕೆಳಗೆ ಬಿದ್ದಾಗ ಆ ರಸ್ತೆಯಲ್ಲಿ ಸಾರ್ವಜನಿಕರಾಗಲಿ, ವಾಹನ ಸವಾರರ ಸಂಚಾರ ಇಲ್ಲದಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

Share with Friends
author avatar
News Desk