LatestTop Storiesಬೆಂಗಳೂರು ಗ್ರಾಮಾಂತರ

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್: 4ನೇ ದಿನವೂ ಪತ್ತೆಯಾಗದ ಸುಳಿವು, ಫೋಟೋದಲ್ಲಿ ಕಾಣಿಸಿಕೊಂಡ

ನೆಲಮಂಗಲ: ನಾಲ್ಕು ದಿನಗಳ ಹಿಂದೆ ಟ್ರೆಕ್ಕಿಂಗ್‌ಗೆ ಬಂದು ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ ಅವರ ಹುಡುಕಾಟ ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ. ದಿನಕ್ಕೊಂದು ಹೊಸ ಸುಳಿವು ಸಿಗುತ್ತಿದ್ದು, ಇದೀಗ ಮತ್ತೊಂದು ಪ್ರಮುಖ ಸುಳಿವು ಪತ್ತೆಯಾಗಿದೆ. ಇಂದಿನ ಕಾರ್ಯಾಚರಣೆ ವೇಳೆ ಬೆಟ್ಟದ ತುತ್ತ ತುದಿಯಲ್ಲಿ ಚಾರಣಿಗರು ಕ್ಲಿಕ್ಕಿಸಿದ ಫೋಟೋದಲ್ಲಿ ಅದ್ವೈತ್ ಕೂಡ ಇರುವುದು ದೃಢಪಟ್ಟಿದೆ.ಉತ್ತರ ಪ್ರದೇಶದ ಇಂದೂರ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಅದ್ವೈತ್ ಉಪಾಧ್ಯಾಯ, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿ ನಾಪತ್ತೆಯಾಗಿ 4 ದಿನಗಳು ಕಳೆದಿವೆ.

ಇಂದು ನೆಲಮಂಗಲ ಡಿವೈಎಸ್‌ಪಿ ಉಮಾರಾಣಿ ಅವರ ನೇತೃತ್ವದಲ್ಲಿ ಸಿಪಿಐ ಭರತ್ ಗೌಡ ಮತ್ತು ತಂಡ ಶೋಧ ಕಾರ್ಯದಲ್ಲಿ ನಿರತರಾಗಿದ್ದರು. ಅದ್ವೈತ್ ಪತ್ತೆಗೆ ಇಂದು ಕೂಡ ಡ್ರೋನ್ ಕಾರ್ಯಾಚರಣೆ, ನುರಿತ ಟ್ರೆಕ್ಕರ್‌ಗಳ ತಂಡ, ಎನ್‌ಡಿಆರ್‌ಎಫ್ ಸಿಬ್ಬಂದಿ ಜೊತೆಗೆ ನೆಲಮಂಗಲ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಆತನ ಸುಳಿವು ಮಾತ್ರ ಇನ್ನೂ ನಿಗೂಢವಾಗಿದೆ.ಇಂದಿನ ಕಾರ್ಯಾಚರಣೆ ವೇಳೆ ಕಡಿದಾದ ಬೆಟ್ಟದ ಮೂಲೆ ಮೂಲೆಗಳಲ್ಲಿ ತನಿಖಾ ತಂಡ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಹುಡುಕಾಟ ನಡೆಸಿತು. ಅದ್ವೈತ್ ಆತ್ಮಹತ್ಯೆಗೆ ಶರಣಾಗಿದ್ದಾನಾ ಅಥವಾ ನಾಪತ್ತೆಯಾಗಿದ್ದಾನಾ ಎಂಬ ಅನುಮಾನವೂ ವ್ಯಕ್ತವಾಗಿದೆ.

ಒಟ್ಟಾರೆ ಶಿವಗಂಗೆ ಬೆಟ್ಟಕ್ಕೆ ಬಂದ ಟೆಕ್ಕಿ ಪತ್ತೆ ಕಾರ್ಯಾಚರಣೆ ಮೂರನೇ ದಿನವೂ ಯಶಸ್ವಿಯಾಗಲಿಲ್ಲ. ಧಾರಾಕಾರ ಮಳೆಯಿಂದಾಗಿ ಮಧ್ಯಾಹ್ನದ ನಂತರ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಹಾಕಬೇಕಾಯಿತು. ಅದ್ವೈತ್ ನಿಗೂಢ ನಾಪತ್ತೆ ಸದ್ಯ ಕಾರ್ಯಾಚರಣೆ ತಂಡಕ್ಕೆ ದೊಡ್ಡ ಸವಾಲಾಗಿದೆ.ಶೋಧ ತಂಡಕ್ಕೆ ಇಂದು ಸಿಕ್ಕ ಅತಿದೊಡ್ಡ ಸುಳಿವು ಎಂದರೆ ಬೆಟ್ಟದ ತುದಿಯಲ್ಲಿ ಚಾರಣಿಗರ ಗುಂಪು ತೆಗೆದ ಫೋಟೋ. ಆ ಫೋಟೋದಲ್ಲಿ ಅದ್ವೈತ್ ಕೂಡ ನಿಂತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ಫೋಟೋದ ಆಧಾರದ ಮೇಲೆ ಆತ ಕೊನೆಯದಾಗಿ ಕಂಡುಬಂದ ಸ್ಥಳವನ್ನು ಗುರುತಿಸಿ, ಆ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಶೋಧ ನಡೆಸಲಾಯಿತು.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅದ್ವೈತ್ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್‌ಗೆ ಬಂದಿದ್ದರು. 4 ದಿನಗಳಿಂದ ಮಗನ ಸುಳಿವೇ ಇಲ್ಲದ ಹಿನ್ನೆಲೆಯಲ್ಲಿ ಇಂದೂರ್‌ನಿಂದ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿದ್ದಾರೆ. ಮಗನನ್ನು ಆದಷ್ಟು ಬೇಗ ಪತ್ತೆ ಮಾಡಿಕೊಡಿ ಎಂದು ಅವರು ಪೊಲೀಸರಿಗೆ ಕಣ್ಣೀರಿಟ್ಟಿದ್ದಾರೆ.ಮಳೆ ಕಡಿಮೆಯಾದ ತಕ್ಷಣ ನಾಳೆಯಿಂದ ಮತ್ತೆ ಶೋಧ ಕಾರ್ಯಾಚರಣೆ ಆರಂಭಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಶಿವಗಂಗೆ ಬೆಟ್ಟದ ಗುಹೆಗಳು, ಕಣಿವೆಗಳು ಮತ್ತು ಅರಣ್ಯ ಪ್ರದೇಶದಲ್ಲಿ ತಪಾಸಣೆ ಹೆಚ್ಚಿಸಲಾಗಿದೆ. ಸಾರ್ವಜನಿಕರು ಯಾವುದೇ ಮಾಹಿತಿ ಇದ್ದರೆ ನೆಲಮಂಗಲ ಪೊಲೀಸರನ್ನು ಸಂಪರ್ಕಿಸುವಂತೆ ಡಿವೈಎಸ್‌ಪಿ ಉಮಾರಾಣಿ ಮನವಿ ಮಾಡಿದ್ದಾರೆ.

Share with Friends
author avatar
Digital Desk